ಮೆಟರ್ನಿಕ್, ಪ್ರಿನ್ಸ್ ಫಾನ್
(1773-1859). ಯೂರೋಪಿನ ರಾಜಕೀಯ ಇತಿಹಾಸದಲ್ಲಿ ಪ್ರಧಾನ ಪಾತ್ರವಹಿಸಿದ ಆಸ್ಟ್ರಿಯದ ರಾಜನೀತಿಜ್ಞ; ರಾಯಭಾರಿ ಹಾಗೂ ರಾಜಕೀಯ ಮುಖಂಡ. ಯುರೋಪಿನಲ್ಲೆಲ್ಲ ಸಂಭವಿಸಿದ ರಾಷ್ಟ್ರೀಯ ಬಂಡಾಯಗಳನ್ನಡಗಿಸುವ ಆಸ್ಟ್ರಿಯ, ಪ್ರಷ್ಯ ಮತ್ತು ರಷ್ಯಗಳ ಪ್ರಯತ್ನಗಳಿಗೆ ಈತನೇ ಪ್ರೇರಕ ಮತ್ತು ಮಾರ್ಗದರ್ಶಕ ಶಕ್ತಿಯಾಗಿದ್ದ.
1773 ಮೇ 15ರಂದು ಕೊಬ್ಲೆಂಜ್ ಎಂಬಲ್ಲಿ ಜನಿಸಿದ. ಇವನ ಪೂಣ್ ಹೆಸರು ಕ್ಲೆಮೆನ್ಸ್ ವೆಂಜಿಲ್ ನೆಪೊಮಕ್ ಲೊಥಾರ್ ಫಾನ್ ಮೆಟರ್ನಿಕ್ ಎಂದು. ತಂದೆ ಕೌಂಟ ಫ್ರಾನ್ಸಿಸ್ ಫಾನ್ ಮೆಟರ್ನಿಕ್ ಕೂಡ ರಾಜಕೀಯ ಕ್ಷೇತ್ರದಲ್ಲಿದ್ದವನೇ. ಸ್ಟ್ರಾಸ್‍ಬರ್ಗ ಮತ್ತು ಮೈಂಜ್‍ಗಳಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿದ. 1795 ರಲ್ಲಿ ಆಸ್ಟ್ರಿಯದ ಛಾನ್ಸಲರ್ ಆಗಿದ್ದ ಪ್ರಿನ್ಸ್ ವೆಂಜಿಲ್ ಕೌನಿಟ್ಜನ ಮೊಮ್ಮಗಳು ಎಲಿಯನೋರಾಳನ್ನು ವಿವಾಹವಾದ. ಈ ಸಂಬಂಧ ಮೆಟರ್ನಿಕನ ಬದುಕಿಗೆ ಹೊಸ ಆಯಾಮ ನೀಡಿತು. ಈತನ ಸುಧೀರ್ಘ ರಾಜಕೀಯ ಜೀವನ ಆರಂಭವಾದ್ದು 1797ರಿಂದ.

ಅಚಲ ಮನೋಭಾವ, ವ್ಯಾಪಕ ಅನುಭವ, ನಿಖರ ತಿಳಿವಳಿಕೆ, ಮಹತ್ವಾಕಾಂಕ್ಷೆ, ದೂರದೃಷ್ಟಿ, ಪ್ರಭಾವಶಾಲಿ ವ್ಯಕ್ತಿತ್ವಗಳಿಂದ ಕೂಡಿದ ಮೆಟರ್ನಿಕ್ ರಾಜಕೀಯ ಕ್ಷೇತ್ರದಲ್ಲಿ ಬಹುಬೇಗ ಮೇಲೇರಿದ. 1797-99ರಲ್ಲಿ ರೆಸ್ಟಾಟ್ ಕಾಂಗ್ರೆಸ್ಸಿನಲ್ಲಿ ಪ್ರತಿನಿಧಿಯಾಗಿದ್ದ ; 1801ರಲ್ಲಿ ಡ್ರೆಸ್‍ಡೆನ್‍ನಲ್ಲಿ ಆಸ್ಟ್ರಿಯದ ಸಚಿವ ಹುದ್ದೆ ವಹಿಸಿಕೊಂಡ; 1803 ರಲ್ಲಿ ಪ್ರಷ್ಯದಲ್ಲಿ ರಾಯಭಾರಿಯಾದ. ನೆಪೋಲಿಯನ್ನನ ಕೋರಿಕೆಯ ಮೇರೆಗೆ ಫ್ರಾನ್ಸ್‍ನಲ್ಲಿ ಆಸ್ಟ್ರಿಯದ ರಾಯಭಾರಿಯಾದ (1806). 1809ರ ಕದನಸಮಯದಲ್ಲಿ ಬಂಧನಕ್ಕೊಳಗಾದರೂ ಶೀಘ್ರವೇ ಬಿಡುಗಡೆಹೊಂದಿ 1809ರ ಅಕ್ಟೋಬರ್ 8 ರಂದು ಆಸ್ಟ್ರೀಯದ ಛಾನ್ಸರಲ್ ಅಥವಾ ಪ್ರಧಾನಿಯಾದ ; ಮುಂದಿನ 38 ವರ್ಷಗಳ ತನಕ ಈ ಉನ್ನತ ಹುದ್ದೆಯಲ್ಲೆ ಮುಂದುವರಿದ.
ಮೊದಲ ನಾಲ್ಕು ವರ್ಷಗಳ ಕಾಲ ಮೆಟರ್ನಿಕ್ ಜಾಣ್ಮೆ ಕೌಶಲಗಳಿಂದ ಆಡಳಿತ ನಡೆಸಿ ನೆಪೋಲಿಯನ್ನನೊಡನೆ ಉಂಟಾದ ಹೋರಾಟದಿಂದ ದುರ್ಬಲವಾಗಿದ್ದ ಆಸ್ಟ್ರಿಯದ ಪರಿಸ್ಥಿತಿಯನ್ನು ಸಾಧಿಸಿದ. ಫ್ರಾನ್ಸ್ ರಷ್ಯಗಳ ತಿಕ್ಕಾಟದಲ್ಲಿ ಆಸ್ಟ್ರಿಯ ಫ್ರಾನ್ಸಿನೊಡನೆ ಒಪ್ಪಂದ ಮಾಡಿಕೊಂಡರೂ ರಷ್ಯದೊಡನೆ ವಿರೋಧ ಕಟ್ಟಿಕೊಳ್ಳದಿದ್ದುದು ಈತನ ರಾಜಕೀಯ ಮತ್ಸದ್ದಿತನಕ್ಕೊಂದು ನಿದರ್ಶನ. ನೆಪೋಲಿಯನ್ನನ ಪರಾಭವದ ತರುವಾಯ ಎರಡೂ ದೇಶಗಳ ನಡುವೆ ಸಂಧಾನ ನಡೆಸಲು ನಿಷ್ಪಕ್ಷಪಾತ ಮಧ್ಯವರ್ತಿಯಾಗಿ ಮುಂದೆ ಬಂದ. 1813 ಜೂನ್ 26 ರಂದು ಡ್ರೆಸ್‍ಡೆನ್‍ನಲ್ಲಿ ನೆಪೋಲಿಯನ್ನನೊಡನೆ ಈತ ನಡೆಸಿದ ಒಂಬತ್ತು ಗಂಟೆಗಳ ಕಾಲದ ಮಾತುಕತೆ ಐರೋಪ್ಯ ಇತಿಹಾಸದಲ್ಲಿ ಸುವಿದಿತ ಸಂಗತಿ. 1814 ಏಪ್ರಿಲ್ 10 ರಂದು ಪ್ಯಾರಿಸಿಗೆ ಬಂದ ಮೆಟರ್ನಿಕ್‍ನಿಗೆ ಅಭೂತ ಪೂರ್ವ ಸ್ವಾಗತ ದೊರೆಯಿತು. ವಿಯೆನ್ನಾ ಕಾಂಗ್ರೆಸ್ಸಿನಲ್ಲೂ ಈತನದು ಪ್ರಮುಖ ಪಾತ್ರ. ಆಸ್ಟ್ರಿಯದ ನಿಯಂತ್ರಣಕ್ಕೊಳಪಟ್ಟಂತೆ ಇಟಲಿಯ ಪ್ರಾಂತ್ಯಗಳ ಪುನರ್ವಿಂಗಡಣೆ ಈತನ ಸಾಧನೆಗಳಲ್ಲೊಂದು. ರಷ್ಯದ ಝಾರ್ ಅಲೆಗ್ಸಾಂಡರ್ ಈತನ ಕನ್ಸರ್ವೆಟಿವ್ ಸಿದ್ಧಾಂತಗಳಿಂದ ಪ್ರಭಾವಿತನಾಗಿದ್ದ.

ಪ್ರಜಾಪ್ರಭುತ್ವವನ್ನು ಹತ್ತಿಕ್ಕಿ ಹಳೆಯ ರಾಜಕೀಯ ನಿರಂಕುಶಪ್ರಭುತ್ವವನ್ನು ಮುಂದುವರಿಸಿಕೊಂಡು ಹೋಗಲು ವಿಯನ್ನಾ ಕಾಂಗ್ರೆಸ್ ಮತ್ತು ಮೆಟರ್ನಿಕ್ ನಡೆಸಿದ ಪ್ರಯತ್ನಗಳು ಸಫಲವಾಗಲಿಲ್ಲ. 1835 ರಲ್ಲಿ ಫ್ರಾನ್ಸಿಸ್‍ನ ಮರಣಾನಂತರ ಮೆಟರ್ನಿಕ್ ಆಸ್ಟ್ರಿಯದಲ್ಲಿ ಯಾವುದೇ ಬದಲಾವಣೆ ತರಲು ಅಸಮರ್ಥನಾಗಿದ್ದ. 1848ರ ಮಾರ್ಚ್‍ನಲ್ಲಿ ಈತನ್ನು ಅಧಿಕಾರ ಪದವಿಯಿಂದ ವಜಾಮಾಡಬೇಕೆಂಬ ಒತ್ತಾಯ ತೀವ್ರವಾದಾಗ ಈತ ರಾಜೀನಾಮೆ ನೀಡಿ ಇಂಗ್ಲೆಂಡಿಗೆ ಪಲಾಯನ ಮಾಡಿದ. 1851ರಲ್ಲಿ ವಿಯನ್ನಾಗೆ ಹಿಂದಿರುಗಿದರೂ ಮೆಟರ್ನಿಕನಿಗೆ ಮುಂದೆ ಯಾವುದೇ ಅಧಿಕಾರ ಪದವಿ ಲಭ್ಯವಾಗಲಿಲ್ಲ. ಈತ 1859 ಜೂನ್ 11 ರಂದು ನಿಧನನಾದ.							      
  (ಎಚ್.ಎಮ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ